
ಮಂಡ್ಯ : ಮದ್ದೂರಿನಲ್ಲಿ ಭಾನುವಾರ ರಾತ್ರಿ ಗಣೇಶೋತ್ಸವದ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ (Stone pelting) ನಡೆದಿದ್ದು, ಇದನ್ನು ವಿರೋಧಿಸಿ ಇಂದು ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಿಂದೂ ಪರ ಕಾರ್ಯಕರ್ತರು ಇಸ್ಲಾಂ ಧ್ವಜವನ್ನು ಕಿತ್ತೆಸೆದು ಕೇಸರಿ ಧ್ವಜವನ್ನು ಸ್ಥಾಪಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮಸೀದಿಯ ಎದುರೇ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ತಳ್ಳಾಟ, ಮಾತಿನ ಚಕಮಕಿ ನಡೆದಿದೆ. ಮಸೀದಿಯ ಎದುರೇ ಪ್ರತಿಭಟನೆಗೆ ಕುಳಿತ ಯುವಕರು ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪೊಲೀಸರ ಲಾಠಿ ಚಾರ್ಜ್ ವೇಳೆ ಮಹಿಳೆಯರೂ ಸೇರಿದಂತೆ ಹಲವು ಮಂದಿಗೆ ಗಾಯಗಳಾಗಿವೆ. ವಾಹನಗಳು ಹಾಗೂ ಅಂಗಡಿಗಳಿಗೆ ಜಖಂ ಆಗಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ಗಣೇಶೋತ್ಸವದ ವೇಳೆ ಕಲ್ಲು ತೂರಾಟ (Stone pelting) ನಡೆಸಿರುವ ಘಟನೆ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ್ (G Parameshwar) ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಯಾವುದೇ ರೀತಿಯ ಅವಘಡಗಳು, ಅನಾಹುತಗಳು ನಡೆಯಬಾರದೆಂದು ಈ ಬಾರಿ ನಡೆಯಬಾರದೆಂದು ತೀವ್ರ ಎಚ್ಚರಿಕೆ ಕೈಗೊಳ್ಳಲಾಗಿತ್ತು. ಹಿರಿಯ ಅಧಿಕಾರಿಗಳನ್ನು ಗಣೇಶೋತ್ಸವದ ಭದ್ರತೆಗೆ ನಿಯೋಜಿಸಲಾಗಿತ್ತು. ಆದರೂ ಸಹ ಸಣ್ಣಪುಟ್ಟ ಘಟನೆಗಳು ನಡೆಯುವುದು ಸಹಜ. ವಿರೋಧ ಪಕ್ಷಗಳು ಈ ಬಗ್ಗೆ ವೃಥಾ ಗುಲ್ಲೆಬ್ಬಿಸುತ್ತಿದೆ ಎಂದು ಹೇಳಿದ ಜಿ. ಪರಮೇಶ್ವರ್, ತಪ್ಪಿತಸ್ಥರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಮಂಡ್ಯ ಉಸ್ತುವಾರಿ ಸಚಿವ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಇದುವರೆಗೂ 15 ಮಂದಿಯನ್ನು ಬಂಧಿಸಲಾಗಿದೆ. ಪೊಲೀಸರು ಈಗಾಗಲೇ ಅಲ್ಲಿ ಮೊಕ್ಕಾಂ ಹೂಡಿದ್ದಾರೆ. ಬಿಜೆಪಿಯವರು ಜನಪರ ಹೋರಾಟ ಮಾಡುತ್ತಿಲ್ಲ. ನಾವು ಈ ಪರಿಸ್ತಿತಿಯನ್ನು ಸೂಕ್ಷ್ಮವಾಗಿ ಬಗೆಹರಿಸಲು ಯೋಚಿಸುತ್ತಿದ್ದೇವೆ. ಪೊಲೀಸರು ಎಲ್ಲೆಡೆ ಅಲರ್ಟ್ ಆಗಿದ್ದರು. ತುಂಬಾ ದೂರದಿಂದ ಕಲ್ಲು ಹೊಡೆದ ದುಷ್ಕರ್ಮಿಗಳು ಗಲಾಟೆಗೆ ಆಸ್ಪದ ಕೊಟ್ಟಿದ್ದಾರೆ. ನಿನ್ನೆ ನಡೆದ ಘಟನೆಯನ್ನು ನಾನು ವಿರೋಧಿಸುತ್ತೇನೆ. ಕ್ರಮವನ್ನೂ ಸಹ ಜರುಗಿಸಲಾಗುತ್ತಿದೆ. ಆದರೂ ಸಹ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಕುರಿತು ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಹಬ್ಬಗಳು, ಗಣಪತಿ ಉತ್ಸವ ಹಾಗೂ ಮೆರವಣಿಗೆಗಳನ್ನು ನೆಮ್ಮದಿಯಾಗಿ ಆಚರಿಸಲಾಗದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ. ಮದ್ದೂರಿನಲ್ಲಿ ಭಾನುವಾರ ರಾತ್ರಿ ನಡೆದ ಗಲಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಗಣೇಶ ವಿಸರ್ಜನೆಯ ಮೆರವಣಿಗೆಯ ಸಂದರ್ಭದಲ್ಲಂತೂ ಮತಾಂಧ ಪುಂಡರು ಗುಂಪು ಕಟ್ಟಿಕೊಂಡು ಕಲ್ಲು ತೂರುವ (Stone pelting) ಘಟನೆ ಮಂಡ್ಯ, ಧಾರವಾಡ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ವರದಿಯಾಗುತ್ತಿದೆ ಎಂದು ಹೇಳಿದ್ದಾರೆ.
ನಿನ್ನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಿಡಿಗೇಡಿಗಳು ಮೆರವಣಿಗೆ ವೇಳೆ ನಿರಂತರ ಕಲ್ಲು ತೂರಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸಿದ್ದಾರೆ, ಕಲ್ಲು ತೂರಾಟದಲ್ಲಿ ಮಹಿಳೆಯರು ಹಾಗೂ ಪೊಲೀಸರು ತೀವ್ರವಾಗಿ ಗಾಯಗೊಂಡಿರುವ ಘಟನೆ ಅತ್ಯಂತ ಆತಂಕಕಾರಿಯಾಗಿದ್ದು ಬಿಜೆಪಿ ಇದನ್ನು ಅತ್ಯುಗ್ರವಾಗಿ ಖಂಡಿಸುತ್ತದೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿಯೂ ಗಣಪತಿ ಮೂರ್ತಿಯನ್ನು ಮಲಿನಗೊಳಿಸಿರುವ ಸುದ್ದಿಯೂ ವರದಿಯಾಗಿದೆ, ಅಲ್ಪಸಂಖ್ಯಾತರ ಹೆಸರಿನ ಪುಂಡರ ಈ ಪರಿಯ ಅಟ್ಟಹಾಸ ಹಿಂದೂ ಧರ್ಮಿಯರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಭಯಗ್ರಸ್ತ ವಾತಾವರಣವನ್ನುಂಟುಮಾಡಿದೆ ಎಂದಿದ್ದಾರೆ.
ಅಲ್ಲದೇ ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದೆ. ಪೊಲೀಸ್ ಠಾಣೆಗಳು ಹಾಗೂ ಪೊಲೀಸರ ಮೇಲೆ ದಾಳಿ ನಡೆದರೂ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗದ ಪರಿಸ್ಥಿತಿಯನ್ನು ನೋಡುತ್ತಿದ್ದರೆ ರಾಜ್ಯದಲ್ಲಿ ‘ಮೊಘಲ್ ಪ್ರೇರಣೆಯ’ ಆಡಳಿತ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಸರ್ಕಾರದ ಈ ಪಕ್ಷಪಾತ ಹಾಗೂ ಮೃದು ಧೋರಣೆ ರಾಜ್ಯದಲ್ಲಿ ಅರಾಜಕತೆ ಉಂಟಾಗಲು ಕಾರಣವಾಗುತ್ತಿದೆ. ಮದ್ದೂರಿನ ಹಾಗೂ ಸಾಗರದ ಘಟನೆಯ ಕುರಿತು ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳದಿದ್ದರೆ, ಮತಾಂಧ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಜರುಗಿಸದಿದ್ದರೆ ರಾಜ್ಯದ ಜನರೇ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿವೈವಿ ಕಿಡಿಕಾರಿದ್ದಾರೆ.
ವರದಿ. ಪ್ರದೀಪ್ ಹಿರೇಮಠ ಸಂಪಾದಕರು ಪರ್ವ ನ್ಯೂಸ್ ಕನ್ನಡ
