ಕಾರವಾರ-ಗೋವಾ ಅಂಚಿನ ಗುಡ್ಡದ ಮೇಲೆ ಅನಾಮಿಕ ವ್ಯಕ್ತಿಯೊಬ್ಬ ವಾಸವಾಗಿದ್ದು, ಆತನ ವರ್ತನೆಯೇ ವಿಚಿತ್ರವಾಗಿದೆ!

ಅರೆಬರೆ ಅಂಗಿಯಲ್ಲಿ ಕಾಣಿಸಿಕೊಳ್ಳುವ ಆತ ಪೂರ್ಣ ಪ್ರಮಾಣದ ಮಾನಸಿಕ ಅಸ್ವಸ್ಥನಲ್ಲ. ಕಟ್ಟುಮಸ್ತಾದ ದೇಹವಿದ್ದರೂ ದುಡಿಯಲು ಹೋಗಲ್ಲ. ಆತನ ಬಳಿ ಮೊಬೈಲ್ ಇಲ್ಲ. ಒಳ್ಳೆಯ ಬಟ್ಟೆಗಳು ಜೊತೆಯಲ್ಲಿಲ್ಲ. ಆತ ಭಿಕ್ಷೆ ಬೇಡಿ ಬದುಕುವ ಮನಸ್ಥಿತಿಯನ್ನು ಹೊಂದಿಲ್ಲ. ಕಲ್ಬಂಡೆಗಳ ಮೇಲಿರುವ ಆತನ ಶಡ್ಡಿನಲ್ಲಿ ಅಡುಗೆ ಬೇಯಿಸಿದ ಕುರುಹುಗಳಿಲ್ಲ. ಈವರೆಗೆ ಆತ ಯಾರಿಗೂ ತೊಂದರೆ ಕೊಟ್ಟಿಲ್ಲ. ಹೀಗಾಗಿ ಆತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವ ದೂರು ಇಲ್ಲ!

ಆ ಅನಾಮಿಕನಿಗೆ ಇಂಗ್ಲಿಷ್ ಅರಿವಿದೆ. ಹಿಂದಿ ಮಾತನಾಡುವುದು ಸಹ ಗೊತ್ತಿದೆ. ಹಗಲಿನಲ್ಲಿ ಬೀದಿ ಬೀದಿ ಅಲೆದಾಡುವ ಆತ ಸಂಜೆ ವೇಳೆ ಗುಡ್ಡದ ತಪ್ಪಲಿಗೆ ಹಾಜರು. ಅವರಿವರು ಕೊಡುವ ಆಹಾರವೇ ಆತನಿಗೆ ಪ್ರಧಾನ. ಕೆಲ ಹೊಟೇಲಿನವರು ಆತನಿಗೆ ಅನ್ನ ನೀಡುತ್ತಾರೆ. ಇನ್ನು ಕೆಲವರು ಕುಡಿಯಲು ನೀರು ಕೊಟ್ಟು ಕಳುಹಿಸುತ್ತಾರೆ. ಹೆಚ್ಚು ಕಡಿಮೆ ಕಳೆದ ಆರು ವರ್ಷಗಳಿಂದ ಆತ ಗುಡ್ಡದ ಮೇಲಿದ್ದರೂ ಹೆಚ್ಚಿಗೆ ಯಾರೂ ತಲೆಕೆಡಿಸಿಕೊಂಡಿಲ್ಲ.

ಸದಾಶಿವಗಡ ಬಳಿಯ ಮಾವಿನಹಳ್ಳ ಗುಡ್ಡದ ಮೇಲಿರುವ ಆತನ ಬಗ್ಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ವಿಚಾರಿಸಿದ್ದಾರೆ. `ಪೆಪರ್ ಆರಿಸುವುದು ಹಾಗೂ ಕಸ ಹೆಕ್ಕುವ ಕೆಲಸ ಮಾಡುವ ಆತ ಹೊರ ಪ್ರಪಂಚದವರಿಗೆ ಇನ್ನೂ ಕುತೂಹಲವಾಗಿಯೇ ಇದ್ದಾನೆ’ ಎಂದವರು ಪ್ರತಿಕ್ರಿಯಿಸಿದರು. `ಆ ಅನಾಮಿಕನ ಬಗ್ಗೆ ಎಲ್ಲಾ ರೀತಿಯಲ್ಲಿಯೂ ವಿಚಾರಿಸಲಾಗಿದೆ. ಆತನಿಂದ ಯಾರಿಗೂ ಉಪದ್ರವವಾಗಿಲ್ಲ’ ಎಂದು ಚಿತ್ತಾಕುಲ ಪಿಎಸ್‌ಐ ಮಹಾಂತೇಶ್ ಅವರು ವಿವರಿಸಿದರು.

By admin

Leave a Reply

Your email address will not be published. Required fields are marked *